6.6 ಲಕ್ಷರೂ.ಗಳ ಉಳಿತಾಯದ ಬಜೆಟ್ ಮಂಡಿಸಿದ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ
ಜಮಖಂಡಿ:
ನಗರಸಭೆಯ ಆದಾಯ ಹಾಗೂ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು 6.60 ಲಕ್ಷರೂಗಳ ಉಳಿತಾಯದ ಬಜೆಟ್‌ನ್ನು ನಗರಸಭೆಯ ಅಧ್ಯಕ್ಷ ಪರಮಾನಂದ ಗೌರೋಜಿ ಮಂಡಿಸಿದರು. ಶುಕ್ರವಾರ ನಗರಸಭೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ 2025-26ನೇ ಸಾಲಿನ ಬಜೆಟ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 3484.75 ಕೋಟಿರೂ.ಗಳ ಆದಾಯವನ್ನು ನಿರೀಕ್ಷಿಸಲಾಗಿದೆ, ಅದರಂತೆ 3478.15 ರೂ.ಗಳ ನಿರೀಕ್ಷಿತ ಪಾವತಿಗಳಿದ್ದು ಕನಿಷ್ಟ 6.60 ಪಕ್ಷರೂಗಳ ಉಳಿತಾಯ ವಾಗಲಿದೆ ಎಂದರು. ನಗರಸಭೆಯ 31 ಸದಸ್ಯರ ಪೈಕಿ ಅಧ್ಯಕ್ಷ, ಉಪಾಧ್ಯಕ್ಷರು ಸೇರಿ 18 ಜನ ಸದಸ್ಯರು, ಓರ್ವ ನಾಮನಿರ್ದೇಶಿತ ಸದಸ್ಯ ಸಭೆಯಲ್ಲಿ ಭಾಗವಹಿಸಿದ್ದರು. ಕನಿಷ್ಟ 16 ಜನ ಸದಸ್ಯರಿರಬೇಕೆಂಬ ನಿಯಮ ವಿರುವದರಿಂದ 11 ಗಂಟೆಗೆ ಪ್ರಾರಂಭವಾಗ ಬೇಕಿದ್ದ ಒಂದು ಗಂಟೆ ತಡವಾಗಿ ಪ್ರಾರಂಭ ವಾಯಿತಾದರೂ 13 ಜನ ಸದಸ್ಯರು ಸಭೆಗೆ ಬರಲಿಲ್ಲ.
ಸದಸ್ಯ ಕುಶಾಲ ವಾಘಮೋರೆ ಮಾತನಾಡಿ ಸ್ಲಂಗಳ ಅಭಿವೃದ್ಧಿ, ಸ್ಮಶಾನಗಳ ಅಭಿವೃದ್ಧಿ, ಕುಡಿಯುವ ನೀರಿನ ಸೌಲಭ್ಯ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ, ಪಾರ್ಕಗಳ ಅಭಿವೃದ್ಧಿಗೆ ಮೀಸಲಿರಿಸಲಾದ ಅನುದಾನ ಸಾಕಾಗುವದಿಲ್ಲ ಎಂದು ಹೇಳಿದಾಗ ಇದು ಸಾಮಾನ್ಯಸಭೆ ಅಲ್ಲ ಬಜೆಟ್ ಕುರಿತಾಗಿ ಮಾತನಾಡಿ ಎಂದು ತಿಳಿಹೇಳಲಾಯಿತು. ಹಿರಿಯ ಸದಸ್ಯರಾದ ದಿಲಾವರ ಶಿರೋಳ, ಸಿದ್ದು ಮೀಸಿಯವರು ಮಾತನಾಡಿ ಸದಸ್ಯರನ್ನು ಶಾಂತ ಗೊಳಿಸಿದರು. ಕಡಕೋಳ ಪುನರ್ವಸತಿ ಕೇಂದ್ರದ ನೀರಿನ ಸಮಸ್ಯೆ ನಗರಸಭೆ ವ್ಯಾಪ್ತಿಗೆ ಬರುವದಿಲ್ಲ ಅದು ನೀರಾವರಿ ಇಲಾಖೆ ಹಾಗೂ ಮುಳುಗಡೆ ಪುನರ್ವಸತಿ ಇಲಾಖೆಯ ಅಡಿಯಲ್ಲಿ ಬರುತ್ತದೆ ಮಾನವೀಯತೆಯ ದೃಷ್ಟಿಯಿಂದ ನಗರಸಭೆಯಿಂದ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
ಬಜೆಟ್ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಜಗದೀಶ ಗುಡಗುಂಟಿ ಮಾತನಾಡಿದರು ಸರ್ಕಾರದಿಂದ ನಗರದ ಹತ್ತಿಕೊಂಡು 6 ಪುನರ್ವಸತಿ ಕೇಂದ್ರಗಳು ಬಂದಿರುವದರಿಂದ ಜನಸಂಖ್ಯೆ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿಯವರು ಪುನರ್ವಸತಿ ಕೇಂದ್ರಗಳನ್ನು ನಗರಸಭೆಗೆ ಬಿಟ್ಟುಕೊಟ್ಟರೆ ನಗರಸಭೆಯ ಆದಾಯ ಹೆಚ್ಚುತ್ತದೆ ಹಾಗೂ ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂದರು. ನಗರದ ಅಭಿವೃದ್ಧಿಗೆ 1800ಕೋಟಿ ರೂ.ಗಳ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಪೌರಾಯುಕ್ತ ಜೋತಿಗಿರೀಶ ಮಾತನಾಡಿ, ನಗರಸಭೆಯ ಆದಾಯಕ್ಕೆ ತಕ್ಕಂತೆ ಬಜೆಟ್ ಪತ್ರಿಕೆಯನ್ನು ಸಿದ್ಧ ಪಡಿಸಲಾಗಿದೆ ಅದಕ್ಕೂ ಪೂರ್ವದಲ್ಲಿ ಸಭೆಯನ್ನು ಕರೆದು ಸದಸ್ಯರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ನಗರದ ಅಭಿವೃದ್ಧಿಗೆ ಪೂರಕ ಬಜೆಟ್ ವರದಿ ಸಿದ್ಧ ಪಡಿಸಲಾಗಿದೆ ಎಂದು ವಿವರಣೆ ನೀಡಿದರು. ಉಪಾಧ್ಯಕ್ಷೆ ರೇಖಾ ಕಾಂಬ್ಳೆ ವೇದಿಕೆಲ್ಲಿದ್ದರು.

0 Comments