ಅಹಿಂದ ನಾಯಕರಾಗಿ ಮುಖ್ಯಮಂತ್ರಿಯಾಗಿದ್ದವರಿಗೆ ಬಡವರ ಉನ್ನತ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಯಾಕೆ? ಡಿಕೆಸಿ ಸಚಿವ ಸಂಪುಟ ಉಪ ಸಮಿತಿ ನಿರ್ಧಾರ ಕೈ ಬಿಡಿ|ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿ ಪಡಿಸಿ |


ಅಹಿಂದ ನಾಯಕರಾಗಿ ಮುಖ್ಯಮಂತ್ರಿಯಾಗಿದ್ದವರಿಗೆ ಬಡವರ ಉನ್ನತ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಯಾಕೆ? ಡಿಕೆಸಿ ಸಚಿವ ಸಂಪುಟ ಉಪ ಸಮಿತಿ ನಿರ್ಧಾರ ಕೈ ಬಿಡಿ|ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿ ಪಡಿಸಿ |



ಸುದ್ದಿ ಮಿತ್ರ ಬಾಗಲಕೋಟೆ: 
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆರು ಗ್ಯಾರಂಟಿ ಭಾಗ್ಯಗಳನ್ನು ನೀಡಿದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗುತ್ತದೆ ಈಗ ಅದು ಶಿಕ್ಷಣ ಕ್ಷೇತ್ರಕ್ಕೂ ಲಗ್ಗೆ ಇಟ್ಟು ವಿಶ್ವವಿದ್ಯಾಲಯಗಳನ್ನು ಮುಚ್ಚುವ ಹಂತಕ್ಕೆ ಸರ್ಕಾರ ಬಂದಿದೆ ಇದರಿಂದಾಗಿ ಕರ್ನಾಟಕದ ಆರ್ಥಿಕ ವ್ಯವಸ್ಥೆ ಕುಸಿತ ಕಂಡಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು  ಬುದ್ದ ಬಸವ ಅಂಬೇಡ್ಕರ್ ಅವರ ತತ್ವ ದಡಿಯಲ್ಲಿ ಅಹಿಂದ ನಾಯಕರಾಗಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಬಡವರ ಪರ ಕಾಳಜೀ ಹೊಂದಿರುವರು ಬಡ ಮಕ್ಕಳ ಉನ್ನತ ಶಿಕ್ಷಣಕ್ಕೆ ಯಾಕೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ, ಸರಕಾರಿ ವಿಶ್ವವಿದ್ಯಾಲಯಗಳನ್ನು ಬಂದ್ ಮಾಡಿ ಪರೋಕ್ಷವಾಗಿ  ಖಾಸಗಿ ಶ್ರೀಮಂತರ ವಿಶ್ವವಿದ್ಯಾಲಯಗಳನ್ನು ಬಲ ಪಡಿಸಲು ಹೊರಟಿದ್ದಾರೆ ಎಂಬ ಅನುಮಾನ ನೂರಾರು ಪ್ರಶ್ನೆಗಳು ಸಾರ್ವಜನಿಕರಲ್ಲಿ ಹುಟ್ಟಿದೆ.

ಹಳ್ಳಿಗಾಡಿನ ಬಡ ಮಕ್ಕಳಿಗೆ ಉನ್ನತ ಶಿಕ್ಷಣ ದಕ್ಕಿಸಿಕೊಳ್ಳಲು ಸರಕಾರಿ ವಿಶ್ವವಿದ್ಯಾನಿಲಯಗಳು ಮಾತ್ರ ಗತಿಯಾಗಿವೆ. ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಬಲಪಡಿಸುವ ಹೊಣೆಯನ್ನು ರಾಜ್ಯ ಸರಕಾರ ಹೊರಬೇಕು. ಈಗಾಗಲೇ ಸರಕಾರಿ ಶಾಲೆಗಳನ್ನು ಬೇರೆಬೇರೆ ಕಾರಣ ನೀಡಿ ಮುಚ್ಚಿ ಖಾಸಗಿ ಶಾಲೆಗಳ ಪ್ರಭಾವಳಿ ಹೆಚ್ಚಾಗಿದೆ.
ಬಿಜೆಪಿ ಸರ್ಕಾರದ ಅವದಿಯಲ್ಲಿ ಏಳು ವಿಶ್ವವಿದ್ಯಾಲಯಗಳು ಪ್ರಾರಂಭಿಸಿದರು ಇದರಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯ ಅತಿದೊಡ್ಡ ವಿಶ್ವವಿದ್ಯಾಲಯ ಆಗಿದ್ದು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಿಂದುಳಿದ ಮಕ್ಕಳು ಓದುತ್ತಿದ್ದಾರೆ.ಇವರ ಓದಿಗೆ ಕೊಳ್ಳೆ ಇಡುವ ಕೆಲಸ ಸರ್ಕಾರ ಮಾಡಬಾರದು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟ ಉಪಸಮಿತಿಯು ಹಿಂದಿನ ಬಿಜೆಪಿ ಸರಕಾರದಲ್ಲಿ ಅಸ್ತಿತ್ವಕ್ಕೆ ಬಂದ ಏಳು ವಿಶ್ವವಿದ್ಯಾನಿಲಯಗಳ ಪೈಕಿ ಆರನ್ನು ಮುಚ್ಚಬೇಕೆಂದು ಶಿಫಾರಸು ಮಾಡಿದೆ. ಸರಕಾರ ಈ ಸಂಬಂಧ ಅಂತಿಮ ನಿರ್ಧಾರ ಕೈಗೊಂಡಿಲ್ಲವಾದರೂ ಮುಚ್ಚುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಇರಬೇಕು ಮತ್ತು ಒಂದು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ನೂರಕ್ಕಿಂತಲೂ ಹೆಚ್ಚು ಕಾಲೇಜುಗಳು ಇರಬಾರದು ಎಂಬುದು ಕೇಂದ್ರ ಸರಕಾರದ ನಿಲುವುವಾಗಿದೆ.ಉನ್ನತ ಶಿಕ್ಷಣದಲ್ಲಿ ಭಾರತ ವಿಶ್ವದ ಸರಾಸರಿಗೆ ಹೋಲಿಸಿದರೆ ಕೆಳಗಿದೆ ಎಂಬ ಕಾರಣಕ್ಕೆ 2013ರಲ್ಲಿಯೇ ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ ಯೋಜನೆಯಡಿ (ಖUSO)ಉನ್ನತ ಶಿಕ್ಷಣದ ಗುಣಮಟ್ಟ ಮತ್ತು ಅದರ ವಿಸ್ತರಣೆ ಬಗ್ಗೆ ಗಮನ ಹರಿಸಲಾಗಿತ್ತು. ರೂಸಾ ಯೋಜನೆಗೆ  ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಚಾಲನೆ ನೀಡಿದ್ದರು.ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ದ್ದಾಗಲೂ ಕೇಂದ್ರ ಸರಕಾರದ ನೀತಿಯಂತೆ ಹೊಸ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲಾಗಿತ್ತು.

ರಾಜ್ಯದಲ್ಲಿ 27ಖಾಸಗಿ ವಿಶ್ವವಿದ್ಯಾನಿಲಯಗಳು ಕಾರ್ಯನಿರ್ವಹಿಸುತ್ತದೆ. ಇವುಗಳನ್ನು ಮಠ ಮಾನ್ಯಗಳು ನಡೆಸುತ್ತವೆ. ಎಲ್ಲ ಪಕ್ಷದ ರಾಜಕಾರಣಿಗಳು ಇವುಗಳ ಮಾಲಕರಾಗಿದ್ದಾರೆ. 11 ಡೀಮ್ಸ್ ವಿಶ್ವವಿದ್ಯಾನಿಲಯಗಳಿವೆ. ಶ್ರೀಮಂತರು ಈ ವಿಶ್ವವಿದ್ಯಾನಿಲಯಗಳ ಚುಕ್ಕಾಣಿ ಹಿಡಿದಿದ್ದಾರೆ. ಇಲ್ಲಿ ಓದುವವರು ಶ್ರೀಮಂತರ ಮಕ್ಕಳೇ ಬಡ ಮಕ್ಕಳು ಉನ್ನತ ಶಿಕ್ಷಣ ಪಡೆಯಬಾರದೆಂದು ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಅವಾಂತರ ಮಾಡುತ್ತಿದೆ.

ಉನ್ನತ ಶಿಕ್ಷಣ ಇಲಾಖೆಯ ಯಾರೊಬ್ಬರೂ ವಿಶ್ವವಿದ್ಯಾನಿಲಯಗಳ ಕಾಯಕಲ್ಪಕ್ಕೆ ಮನಸ್ಸು ಮಾಡುತ್ತಿಲ್ಲ. ಪೂರ್ಣ ಪ್ರಮಾಣದ ಬೋಧಕ ಸಿಬ್ಬಂದಿ ಕೊರತೆ ಇರುವುದರಿಂದ ಸಂಶೋಧನಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಒಮ್ಮೆ ಸರಕಾರಿ ವಿಶ್ವವಿದ್ಯಾನಿಲಯಗಳು ಗುಣಮಟ್ಟ ಕಳೆದುಕೊಂಡು ವಿಶ್ವಾಸಾರ್ಹ ಅಲ್ಲ ಎಂಬುದು ಸಾಬೀತಾದರೆ ಖಾಸಗಿ ವಿಶ್ವವಿದ್ಯಾನಿಲಯಗಳು ಆಕ್ರಮಿಸಿಕೊಳ್ಳುತ್ತವೆ. ಸದ್ಯ ಖಾಸಗಿ ವಿಶ್ವವಿದ್ಯಾನಿಲಯ ಮತ್ತು ಡೀಮ್ಸ್ ವಿಶ್ವವಿದ್ಯಾನಿಲಯಗಳು ಹೊರ ರಾಜ್ಯದ, ಸ್ಥಳೀಯ ಶ್ರೀಮಂತ ಮಕ್ಕಳಿಗೆ ಮೀಸಲಾಗಿವೆ. ಸರಕಾರಿ ವಿಶ್ವವಿದ್ಯಾನಿಲಯಗಳು ಮುಚ್ಚುತ್ತಾ ಹೋದರೆ ಖಾಸಗಿ ವಿಶ್ವವಿದ್ಯಾನಿಲಯಗಳ ಕಬಂಧ ಬಾಹು ಎಲ್ಲೆಡೆ ಚಾಚುತ್ತದೆ.

ಇಷ್ಟೆಲ್ಲಾ ಬೆಳವಣಿಗೆ ನಡೆದರೂ ಮೌನವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೌನ ಮುರಿದು ಡಿ.ಕೆ ಶಿವಕುಮಾರ್ ಅವರ ಸಚಿವ ಸಂಪುಟದ ಉಪ ಸಮಿತಿ ನಿರ್ಧಾರ ಕೈಬಿಟ್ಟು ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಒತ್ತು ನೀಡಿ  ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಬಡ ಮಕ್ಕಳ ಉನ್ನತ ಶಿಕ್ಷಣಕ್ಕೆ ಆಸರೆಯಾಗಿ ಆರು ಗ್ಯಾರಂಟಿಗಳಿಗೆ  ನೀಡಿದ ಮಹತ್ವವನ್ನು ವಿಶ್ವವಿದ್ಯಾಲಯಗಳಿಗೆ ನೀಡಿ ಏಳನೇ ಗ್ಯಾರಂಟಿ ಭಾಗ್ಯವನ್ನಾಗಿ ಪರಿವರ್ತಿಸುವ ಕಾರ್ಯ ಮಾಡಬೇಕೆಂದು ಶಿಕ್ಷಣ ಪ್ರೇಮಿಗಳ ಮತ್ತು ವಿದ್ಯಾರ್ಥಿಗಳ ಬಯಕೆಯನ್ನು ಈಡೇರಿಸುವ ಕೆಲಸ ಮಾಡಿ.

ಸುದ್ದಿ ಮಿತ್ರ ವರದಿ ಅಪ್ಪು ಪೋತರಾಜ
 

Post a Comment

0 Comments