ಕರ್ನಾಟಕ ಬಂದ್ ನಡುವೆಯೂ 7,8,9 ತರಗತಿ ಪರೀಕ್ಷೆಗಳು ನಡೆಯುತ್ತದೆ ಪರೀಕ್ಷೆ ಮುಂದೂಡಲು ಸಾಧ್ಯವಿಲ್ಲ- ಮಧು ಬಂಗಾರಪ್ಪ

 ಕರ್ನಾಟಕ ಬಂದ್ ನಡುವೆಯೂ 7,8,9 ತರಗತಿ ಪರೀಕ್ಷೆಗಳು ನಡೆಯುತ್ತದೆ. ಪರೀಕ್ಷೆ ಮುಂದೂಡಲು ಸಾಧ್ಯವಿಲ್ಲ- ಮಧು ಬಂಗಾರಪ್ಪ



ಸುದ್ದಿ ಮಿತ್ರ ಬೆಂಗಳೂರು:
 ಬೆಳಗಾವಿಯಲ್ಲಿ ಮರಾಠಿಗರ ಉದ್ದಟತನ ವಿರೋಧಿಸಿ ಕನ್ನಡಪರ ಸಂಘಟನೆಗಳು ಮಾ.22 ರಂದು ಕರ್ನಾಟಕ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ  ಈಗಾಗಲೇ ನಿಗದಿಯಾಗಿರುವ ಯಾವುದೇ ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಿಲ್ಲ ಬಂದ್ ನಡುವೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ಪಷ್ಟ ಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ಮಾ.22 ರಂದು 7,8,9ನೇ ತರಗತಿ ಪರೀಕ್ಷೆಗಳ ವೇಳಾಪಟ್ಟಿ ನಿಗದಿಯಾಗಿದೆ.ಕರ್ನಾಟಕ ಬಂದ್ ಇದೆ ಎಂದು ಈಗ ಮುಂದೂಡಲು ಸಾಧ್ಯವಿಲ್ಲ. ಬಂದ್ ಇದ್ದರೂ ಪರೀಕ್ಷೆ ಅದರ ಪಾಡಿಗೆ ನಡೆಯಲಿದೆ ಎಂದು ತಿಳಸಿದ್ದರು.
ಬಂದ್‌ ಮಾಡುವ ಹೋರಾಟಗಾರರು ಪರೀಕ್ಷೆಗೆ ಹೋಗಬೇಡಿ ಎಂದು ಮಕ್ಕಳಿಗೆ ಹೇಳುವುದಿಲ್ಲ. ಮಕ್ಕಳು ಗೊಂದಲ ಆಗುವುದು ಬೇಡ. 6,7,8,9 ನೇ ತರಗತಿ ಪರೀಕ್ಷೆಗಳು ನಿಗದಿಯಂತೆ ನಡೆಯುತ್ತವೆ. ಮಕ್ಕಳು ಪರೀಕ್ಷೆ ಬರೆಯಲಿ. ಈಗಾಗಲೇ ವೇಳಾಪಟ್ಟಿ ಸಿದ್ಧತೆ ಮಾಡಿ ಪ್ರಕಟ ಮಾಡಿದ್ದೇವೆ. ವೇಳಾಪಟ್ಟಿ ಬದಲಾವಣೆ ಆದರೆ, ಕಷ್ಟ ಆಗುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ಮುಂದೂಡಿಕೆ ಸರಿಯಲ್ಲ ಎಂದರು.

ಮಕ್ಕಳಿಗೆ ಯಾವುದೇ ತೊಂದರೆ ಆಗದ ರೀತಿ ಸಹಕಾರ ನೀಡಬೇಕೆಂದು ಹೋರಾಟಗಾರರಿಗೆ ಮನವಿ ಮಾಡುತ್ತೇನೆ. ಹೋರಾಟ ಮಾಡೋಕೆ ನಿಮಗೆ ಹಕ್ಕು ಇದೆ. ಆದರೆ, ಪರೀಕ್ಷೆ ಮಕ್ಕಳಿಗೆ ಬಹಳ ಮುಖ್ಯವಾದದ್ದು. ಮಕ್ಕಳ ಭವಿಷ್ಯ ಪರೀಕ್ಷೆಯಲ್ಲಿದೆ. ಮಕ್ಕಳ ಭವಿಷ್ಯಕ್ಕೆ ಯಾವುದೇ ಅಡಚಣೆ ಮಾಡುವುದಿಲ್ಲ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.

ಇದೇ ವೇಳೆ 6 ವರ್ಷದ ನಿಯಮ ವಿಚಾರ ಕುರಿತು ಮಾತನಾಡಿದ ಅವರು, 6 ವರ್ಷದ ನಿಯಮ ಸಡಿಲಿಕೆ ಸಾಧ್ಯವಿಲ್ಲ. ಇದರಲ್ಲಿ ನಾನೇನು ಮಾಡಲು ಸಾಧ್ಯವಿಲ್ಲ. ಈಗಾಗಲೇ ಹಲವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಕೂಡಾ ಅವರ ಅರ್ಜಿ ವಜಾ ಮಾಡಿದೆ. ನ್ಯಾಯಾಲಯ ಏನೇ ಆದೇಶ ಕೊಟ್ಟರೂ ಅದನ್ನು ಪಾಲನೆ ಮಾಡುತ್ತೇವೆಂದು ಹೇಳಿದರು.

6 ವರ್ಷದ ನಿಯಮದಿಂದ ಬೇಸರವಾಗುತ್ತದೆ ನಿಜ. ಆದರೆ ನಿಯಮದ ಪ್ರಕಾರ ನಾವು ನಡೆಯಬೇಕು. 1 ತಿಂಗಳು, 2 ತಿಂಗಳು ಕಡಿಮೆ ಇರುವವರಿಗೆ ಕೊಟ್ಟರೆ ಮತ್ತೊಬ್ಬರು ಕೇಳುತ್ತಾರೆ. ಇದೆಲ್ಲವೂ ಬಹಳ ಚರ್ಚೆ ಆಗುವ ವಿಷಯ. ಎಷ್ಟೋ ಪೋಷಕರು 7 ದಿನ ಕಡಿಮೆ ಅಂತಿದ್ದಾರೆ. ಆದರೆ, ಅದು ಕಾನೂನಿನಲ್ಲಿ ಇಲ್ಲ. ನಾವು ಅದನ್ನು ಪರಿಗಣಿಸಲು ಸಾಧ್ಯವಿಲ್ಲ. ಈಗ ಈ ವಿಷಯ ಕೋರ್ಟ್ ನಲ್ಲಿದೆ. ಕೋರ್ಟ್ ನಲ್ಲಿ ನಿರ್ಧಾರ ಬಂದರೆ ನಾವು ತೀರ್ಮಾನ ಮಾಡಬಹುದು. ಕೋರ್ಟ್‌ ಆದೇಶದಂತೆ ನಡೆದುಕೊಳ್ಳುತ್ತೇವೆಂದರು.


Post a Comment

0 Comments